ಫ್ಲ್ಯಾಹರ್ಟಿ, ರಾಬರ್ಟ್
	1884-1951. ಛಾಯಾಗ್ರಾಹಕ, ಅಮೆರಿಕ ಸಾಕ್ಷ್ಯಚಿತ್ರಗಳ ಅದ್ಯಪ್ರವರ್ತ, ಮೂಲತಃ ಅನ್ವೇಷಕ. 1884 ಫೆಬ್ರುವರಿ 16ರಂದು ಅಮೆರಿಕದ ಮಿಚಿಗನ್ ಪ್ರಾಂತ್ಯದ ಏರನ್ ಮೌಂಟನಿನಲ್ಲಿ ಜನಿಸಿದ. ಇವನ ತಂದೆ ಗಣಿ ಎಂಜನಿಯರ್. ಬಾಲ್ಯದಲ್ಲಿಯೇ ಕುಟುಂಬ ಕೆನಡಕ್ಕೆ ವಲಸೆ ಹೋಯಿತು. ಹನ್ನೆರಡನೆಯ ವಯಸ್ಸಿನಲ್ಲಿಯೇ ತಂದೆಯೊಡನೆ ಕೆನಡದ ಚಿನ್ನ ಹಾಗೂ ತಾಮ್ರದ ಗಣಿ ಪ್ರದೇಶಗಳಿಗೆ ಅನ್ವೇಷಕ ಯಾತ್ರೆ ಹೋಗುತ್ತಿದ್ದ. ಟೊರಾಂಟೊ ನಗರದಲ್ಲಿ ಆರಂಭಿಕ ವಿದ್ಯಾಭ್ಯಾಸ ಮಾಡಿ ಮಿಚಿಗನ್ನಿನ ಗಣಿವಿಜ್ಞಾನ ಕಾಲೇಜಿನಲ್ಲಿ ವಿಶೇಷ ಅಧ್ಯಯನ ನಡೆಸಿದ. ಉತ್ತರ ಕೆÀನಡ ಪ್ರಾಂತ್ಯದಲ್ಲಿ ಕಬ್ಬಿಣ ಅದುರು ಶೋಧನೆಯಲ್ಲಿ ಹಲವಾರು ವರ್ಷ ಕಳೆದ. ಆಗಿವನಿಗೆ ಅನ್ವೇಷಣ ಹಾಗೂ ಛಾಯಾಗ್ರಹಣವೇ ಹವ್ಯಾಸವಾಗಿತ್ತು. ಉತ್ತರ ಕೆನಡ ರೈಲ್ವೆಯ ವಿಲಿಯಮ್ ಮೆಕೆಂಜಿಯ ಆದೇಶದ ಮೇರೆಗೆ ಕೆನಡದ ಆಕ್ರ್ಟಿಕ್ ಪ್ರದೇಶಗಳ ಅನ್ವೇಷಣೆ ಮಾಡಿ ಭೂಪಠಗಳನ್ನು ರಚಿಸಿಕೊಟ್ಟ. ಛಾಯಾಗ್ರಹಣ ಹವ್ಯಾಸ ಚಿತ್ರೀಕರಣ ಆಸಕ್ತಿಗೆ ಎಡೆಕೊಟ್ಟಿತ್ತು. ಇವನ ಪ್ರಥಮ ಚಿತ್ರ ನಾನೂಕ್ ಆಫ್ ದಿ ನಾರ್ತ್ (1922). ಎಸ್ಕಿಮೊ ಜನರ ಜೀವನ ವಿಧಾನದ ನಾಟಕೀಯ ನಿರೂಪಣೆ ಇದು. ಬಫಿನ್ ದ್ವೀಪದ ಎಸ್ಕಿಮೊಗಳ ಬಗ್ಗೆ ಮೊತ್ತ ಮೊದಲಿಗೆ ತೆಗೆದ ಈ ಚಿತ್ರ 17 1/2 ಗಂಟೆಗಳ ದೀರ್ಘಕಾಲದ್ದಾಗಿತ್ತು. ಈ ಚಿತ್ರ ತೆಗೆಯಲು ಎಸ್ಕಿಮೊಗಳ ನಡುವೆ ಅವರಂತೆಯೇ 16 ತಿಂಗಳ ಕಾಲ ಜೀವಿಸಿದ್ದ. ಅಂತರಾಷ್ಟ್ರೀಯ ಖ್ಯಾತಿಗಳಿಸಿದ ಈ ಚಿತ್ರ, ವಾಸ್ತವತೆಯ ವಸ್ತುನಿಷ್ಠ ನಿರೂಪಣಾ ವಿಧಾನದಲ್ಲಿ ಅಕಥಾ ಸಾಹಿತ್ಯವನ್ನು ಚಿತ್ರೀಕರಿಸುವ ಪದ್ಧತಿಗೆ ಬೀಜರೂಪವಾಗಿ 30ರ ದಶಕದಲ್ಲಿ ಮೂಡಿಬಂದ ಸಾಕ್ಷ್ಯಚಿತ್ರ ಚಳವಳಿಗೆ ನಾಂದಿ ಹಾಡಿತು. ಇವನ ಎರಡನೆಯ ಚಿತ್ರ ಮೊಆನಾ (1926) ಅಮೆರಿಕದ ದಕ್ಷಿಣ ಸಾಗರಾಂತರ ದ್ವೀಪಗಳ ಜನರನ್ನು ಕುರಿತದ್ದು. ನಾಗರಿಕತೆಯಿಂದ ಕಲುಷಿತಗೊಳ್ಳದ ಶುದ್ಧ ಸಂಸ್ಕøತಿಯ ಜನಜೀವನದ ಅಪೂರ್ವ ದಾಖಲೆಯಿದು. ಸಮೊವ ದ್ವೀಪದ ಒಂದು ಕುಟುಂಬದೊಡನೆ ಒಂದು ವರ್ಷ ಸಹಜೀವನ ನಡೆಸಿ, ಅನಂತರ ಹತ್ತು ತಿಂಗಳು ಚಿತ್ರೀಕರಣ ಮಾಡಿದ. ಸಮೊವನರ ಚರ್ಮದ ಬಣ್ಣವನ್ನು ಗ್ರಹಿಸತಕ್ಕ ಪ್ಯಾಂಕ್ರೊಮ್ಯಾಟಿಕ್ ಫಿಲ್ಮನ್ನು ಬಳಸಿದ ಪ್ರಥಮ ಚಿತ್ರ ಇದು. ನ್ಯೂ ಯಾರ್ಕ್ ನಗರದ ಹಿನ್ನೆಲೆ ಇಟ್ಟುಕೊಂಡು ಸ್ಟೋರಿ ಆಫ್ ಎ ಪಾಟರ್ (1925) ಹಾಗೂ ದಿ ಟ್ವೆಂಟಿಫೋರ್ ಡಾಲರ್ ಐಲೆಂಡ್ ಎಂಬ ಇವನ ಎರಡು ಚಿತ್ರಗಳು ಅಪೂರ್ಣವಾಗೇ ಉಳಿದುವು.

	ಹೈಟ್ ಷಾಡೋಸ್ ಆಫ್ ಸೌತ್ ಸೀಸ್ (1928) ಚಿತ್ರ ನಿರ್ದೇಶನ ಕಾಲದಲ್ಲಿ ಕಥೆ ಹಾಗೂ ತಾರಾಗಣದ ವಿಚಾರವಾಗಿ ನಿರ್ಮಾಪಕರಾದ ಮೆಟ್ರೊ ಗೋಲ್ಡ್‍ವಿನ್ ಮೇಯರ್ ಸಂಸ್ಥೆಯೊಂದಿಗೆ ವಿರಸ ಬಂದಿತಾಗಿ ಈತ ತನ್ನ ಹೊಣೆಯಿಂದ ಕಳಚಿಕೊಂಡ. ಟ್ವೆಂಟಿಯತ್ ಸೆಂಚುರಿ ಫಾಕ್ಸ್ ಸಂಸ್ಥೆಗೆ ಇವನು ನಿರ್ದೇಶಿಸಿದ, ಪ್ಯೂಬ್ಲೊ ಇಂಡಿಯನ್ನರನ್ನು ಕುರಿತ ಅಕೊಮ, ದಿ ಸ್ಕೈ ಸಿಟಿ (1928) ಚಿತ್ರದ ಮೂಲಪ್ರತಿ ಬೆಂಕಿಯಲ್ಲಿ ನಾಶವಾಯಿತು. ವಿಶಿಷ್ಟ ಜೀವನದ ಅನುಭವವನ್ನು ಪುನಸೃಷ್ಟಿಗೊಳಿಸುವ ಈತನ ಚಿತ್ರೀಕರಣ ಧಾಟಿಗೆ ಹಾಲಿವುಡ್ಡಿನಲ್ಲಿ ಪ್ರತಿರೋಧ ಪ್ರತಿಕ್ರಿಯೆ ಬೆಳೆಯತೊಡಗಿ, ಇವನಿಗೆ ಅಲ್ಲಿರುವುದು ಅಸಹನೀಯವಾಯಿತು. ಇಂಗ್ಲೆಂಡಿಗೆ ವಲಸೆ ಬಂದ. ಅಲ್ಲಿನ ಸಾಕ್ಷ್ಯಚಿತ್ರ ಚಳವಳಿಯ ಸ್ಥಾಪಕವಾದ ಗ್ರಿಯರ್‍ಸನ್ನನ ಜೊತೆ ಸಹಕರಿಸಿ ಈ ಚಳವಳಿಗೆ ಸ್ಫೂರ್ತಿ ಕೊಟ್ಟ. ಗ್ರಿಯರ್‍ಸೆನ್ನನ ಸಹನಿರ್ದೇಶಕನಾಗಿ ಇಂಡಸ್ಟ್ರಿಯಲ್ ಬ್ರಿಟನ್ (1932) ಚಿತ್ರವನ್ನು ನಿರ್ದೇಶಿಸಿದ. ಜರ್ಮನ್ ನಿರ್ದೇಶಕ ಎಫ್. ಡಬ್ಲ್ಯು. ಮಾರ್ನ್ ಜೊತೆ ಟಾಬು (1931) ಎಂಬ ಉತ್ತಮ ಚಿತ್ರವನ್ನು ತೆರೆಗೆ ತಂದ. ಆರಾನ್ ದ್ವೀಪದ ಜನ ಸಾಗರದೊಡನೆ ನಡೆಸುವ ಅದ್ಭುತ ಜೀವನ ಹಾಗೂ ಷಾರ್ಕ್ ಮೀನಿನ ಬೇಟೆಯನ್ನು ಕುರಿತ ನೈಜಚಿತ್ರ ಮ್ಯಾನ್ ಆಫ್ ಆರಾನ್ (1934) ಅತ್ಯಂತ ಜನಪ್ರಿಯವಾಯಿತು. ರಡ್‍ಯಾರ್ಡ್ ಕೆಪ್ಲಿಂಗ್‍ನ ಕೃತಿಯೊಂದರಿಂದ ಪ್ರೇರಿತನಾಗಿ ಎಲಿಫೆಂಟ್ ಬಾಯ್ (1937) ಎಂಬ ಚಿತ್ರವನ್ನು ಭಾರತದಲ್ಲಿ ಚಿತ್ರೀಕರಿಸಿದ. ಇದರಲ್ಲಿ ಮೈಸೂರು ಸಾಬು ಅಭಿನಯಿಸಿದ್ದಾನೆ. ಮತ್ತೆ ಅಮೆರಿಕಕ್ಕೆ ಹೋಗಿ ಬಂದ. ದಿ ಲ್ಯಾಂಡ್ (1942), ಲೂಸಿಯಾನ ಸ್ಟೋರಿ (1948)-ಇವು ಇವನು ನಿರ್ಮಿಸಿದ ಕೊನೆಯ ಚಿತ್ರಗಳು.

	ಕಲಾತ್ಮಕ ಸಾಕ್ಷ್ಯಚಿತ್ರಗಳ ಪಿತಾಮಹನೆಂದು ಖ್ಯಾತಿಗಳಿಸಿದ ಫ್ಲ್ಯಾಹರ್ಟಿ ಜುಲೈ 23, 1951ರಂದು ನಿಧನನಾದ. ಈತನ ಪತ್ನಿ ಫ್ರಾನ್ಸಿಸ್ ಕೂಡ ಉತ್ತಮ ಛಾಯಾಗ್ರಾಹಕಿ. ಫ್ಲ್ಯಾಹರ್ಟಿ ಚಲನಚಿತ್ರಗಳ ಉತ್ತಮ ಸ್ಥಿರಚಿತ್ರಗಳನ್ನು ಈಕೆ ತೆಗೆದಿದ್ದಾಳೆ. ಫ್ಲ್ಯಾಹರ್ಟಿಯ ಚಲನಚಿತ್ರ ನಿರ್ಮಾಣ ರೀತಿಯ ಪ್ರಸಾರಕ್ಕಾಗಿ ಈಕೆ ಸಂಘಟಿಸುತ್ತಿದ್ದ ಸಣ್ಣ ಪ್ರಮಾಣದ ಫ್ಲ್ಯಾಹರ್ಟಿ ಸೆಮಿನಾರುಗಳು ಈಗ ಅಂತಾರಾಷ್ಟ್ರೀಯ ಮಟ್ಟದವಾಗಿ ಖ್ಯಾತ್ತಿ ಗಳಿಸುತ್ತಿವೆ.
(ಎಸ್.ಎಸ್.ಎಂ.ಯು.)

ಪವರ್ಗದ ಮೂರನೆಯ ಅಕ್ಷರ. ಅಲ್ಪಪ್ರಾಣ ಮೌರ್ಯರ ಕಾಲದ ಬ್ರಾಹ್ಮೀಯಲ್ಲಿ ಇದರ ಆಕಾರ ಚೌಕನಾದ್ದು. ಇದೇ ರೂಪವೆ ಮುಂದುವರಿದರೂ ಮೂಲೆಗಳು ಸ್ವಲ್ಪ ಗುಂಡಗಾಗುತ್ತ ಹೋಗುತ್ತವೆ. ಸುಮಾರು ಐದನೆಯ ಶತಮಾನದಲ್ಲಿ ಎಡಭಾಗದಲ್ಲಿ ರೇಖೆ ಕೊಂಡಿಯಂತಾಗುತ್ತದೆ. ಒಂಬತ್ತನೆಯ ಶತಮಾನದಲ್ಲಿ ಎಡಭಾಗದ ಈ ಕೊಂಡಿ ಬೇರೆಯಾಗಲು ಹವಣಿಸುತ್ತದೆ. ಹನ್ನೊಂದನೆಯ ಶತಮಾನದಲ್ಲಿ ಪೂರ್ಣ ವಿಕಾಸಹೊಂದಿ ಅಕ್ಷರದ ಮೇಲ್ಭಾಗದ ರೇಖೆ ಇಲ್ಲವಾಗಿ ತಳದಲ್ಲಿ ಹೊಕ್ಕಳು ಕಾಣಿಸಿಕೊಳ್ಳುತ್ತದೆ. ಇದೇ ರೂಪವೇ ಮುಂದುವರಿಯುತ್ತದೆ.
(ಎ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ